ನಂದಿದುರ್ಗ
ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ಕೋಟೆಯಿಂದ ಕೂಡಿದ ಒಂದು ಬೆಟ್ಟ. ಬೆಂಗಳೂರಿಗೆ ಸುಮಾರು 53 ಕಿಮೀ. ಉತ್ತರದಲ್ಲಿದೆ. ಸಮುದ್ರಮಟ್ಟದಿಂದ ಇದರ ಎತ್ತರ 1,478 ಮೀ. ಇದು ಕರ್ನಾಟಕದ ಜನಪ್ರಿಯ ಗಿರಿಧಾಮ. ಇದರ ಮೇಲ್ಭಾಗ ಚಪ್ಪಟೆಯಾಗಿ ಪಶ್ಚಿಮಕ್ಕೆ ಇಳಿಜಾರಾಗಿದೆ. ಇದರ ನಡುವೆ ಅಮೃತ ಸರೋವರ ಎಂಬ ಕೊಳವುಂಟು. ಇದಕ್ಕೆ ಸ್ವಲ್ಪ ದೂರದಲ್ಲಿ ಟೀಪು ಸುಲ್ತಾನ ನಮಾಜು ಮಾಡಲು ಬಳಸುತ್ತಿದ್ದ ಜಗತಿ ಇದೆ. ಟೀಪು ಇಲ್ಲಿಗೆ ಬಂದಾಗ ತಂಗುತ್ತಿದ್ದ ಕಟ್ಟಡವೂ ಇದೆ.

ನಂದಿ ಬೆಟ್ಟದ ಮೇಲೆ ದುರ್ಗವನ್ನು ಮೊಟ್ಟಮೊದಲು ಕಟ್ಟಿದವನು ಪ್ರಾಯಶಃ ಚಿಕ್ಕಬಳ್ಳಾಪುರದ ಪ್ರಭುಗಳು. ಹೈದರ್ ಮತ್ತು ಟೀಪು ಕಟ್ಟಿಸಿದ ಕೋಟೆಯ ಭಾಗಗಳು ಈಗ ಉಳಿದಿವೆ. ಬೆಟ್ಟದ ನೈಋತ್ಯ ಮೂಲೆಯಲ್ಲಿರುವ ಕಡಿದಾದ ಬಂಡೆಗೆ ಟೀಪು ಪ್ರಪಾತ ಎಂದು ಹೆಸರು. ಟೀಪುವಿನ ಕಾಲದಲ್ಲಿ ಅಪರಾಧಿಗಳನ್ನು ಇದರ ತುದಿಯಿಂದ ಕೆಳಕ್ಕೆ ತಳ್ಳುತ್ತಿದ್ದರೆಂದು ಹೇಳಲಾಗಿದೆ. ಉತ್ತರದಲ್ಲಿ ನಂದಿ ಗ್ರಾಮದ ಬಳಿಯಲ್ಲಿರುವ ಕಡಿದಾದ ಬಂಡೆಯೊಂದನ್ನು ಹೈದರ್ ಪ್ರಪಾತ ಎನ್ನುತ್ತಾರೆ. ನಂದಿಬೆಟ್ಟದ ಮೇಲೆ ಯೋಗನಂದೀಶ್ವರನ ದೊಡ್ಡ ದೇವಾಲಯವಿದೆ. ಇಲ್ಲಿ ಪ್ರವಾಸಿಗಳಿಗಾಗಿ ಹಲವು ಬಂಗಲೆಗಳಿವೆ. ಇಲ್ಲಿಯ ವಾಯುಗುಣ ತಂಪಾದ್ದು. ಸುತ್ತಣ ಪ್ರದೇಶ ಇಲ್ಲಿಂದ ರಮ್ಯವಾಗಿ ಕಾಣುತ್ತದೆ.

ಕೂಷ್ಮಾಂಡ ಋಷಿ ಇಲ್ಲಿ ತಪಸ್ಸು ಮಾಡಿದನೆಂದು ಸ್ಥಳ ಪುರಾಣ. ಆದ್ದರಿಂದ ಇದಕ್ಕೆ ಕೂಷ್ಮಾಂಡಗಿರಿ ಎಂಬ ಹೆಸರಿತ್ತು. ಗಂಗರು ಇದರ ಒಡೆತನ ಪಡೆದಿದ್ದರೆಂಬುದು ಇತಿಹಾಸದ ಸಂಗತಿ. ಗಂಗರು ನಂದಗಿರಿಯ ಪ್ರಭು ಎಂಬ ಬಿರುದು ತಳೆದಿದ್ದರು. ಇದು ಜೈನಕ್ಷೇತ್ರವಾಗಿತ್ತು. `ನಂದಗಿರಿ' ಎಂಬುದು ಇದರ ಮೊದಲಿನ ಹೆಸರು. ಚೋಳರ ಕಾಲದಲ್ಲಿ, 11ನೇ ಶತಮಾನದಲ್ಲಿ ಇದರ ಹೆಸರು ನಂದಗಿರಿ ಎಂದಾಯಿತು. 1770ರಲ್ಲಿ ಇದನ್ನು ಹೈದರ್ ಅಲಿ ಮರಾಠರಿಂದ ವಶಪಡಿಸಿಕೊಂಡ. ಈಗ ಜೀರ್ಣವಾಗಿರುವ ಕೋಟೆಯನ್ನು ಕಟ್ಟಿಸಿದವನು ಅವನು ಮತ್ತು ಅವನ ಮಗ ಟೀಪು. ಬ್ರಿಟಿಷರು 1791ರಲ್ಲಿ ಇದನ್ನು ಬೇಸಗೆಯ ವಿಹಾರಸ್ಥಳವಾಗಿ ಬಳಸುತ್ತಿದ್ದರು. 1799-1808ರಲ್ಲಿ ಇದು ಒಂದು ಸೈನಿಕ ಠಾಣೆಯಾಗಿತ್ತು.
ನಂದಿ ಬೆಟ್ಟದಲ್ಲಿ ಅಥವಾ ಇದರ ಬಳಿಯಲ್ಲಿ ಪಾಲಾರ್, ಉತ್ತರ ಪೆನ್ನಾರ್, ದಕ್ಷಿಣ ಪೆನ್ನಾರ್, ಚಿತ್ರಾವತಿ, ಅರ್ಕಾವತಿ, ಪಾಪಗ್ನಿ ಮುಂತಾದ ನದಿಗಳು ಉಗಮಿಸುತ್ತವೆ. ನಂದಿ ಬೆಟ್ಟದ ಸುತ್ತ ಇರುವ ಬೆಟ್ಟಗಳಲ್ಲಿ ಕೆಲವು ಚೆನ್ನಕೇಶವ ಬೆಟ್ಟ (1.452 ಮೀ.), ಬ್ರಹ್ಮಗಿರಿ (1.428 ಮೀ.) ಮತ್ತು ಸ್ಕಂದಗಿರಿ (1.448 ಮೀ.). ನಂದಿಬೆಟ್ಟದ ಬುಡದಲ್ಲಿ ನಂದಿ ಗ್ರಾಮವಿದೆ. ಇಲ್ಲಿ ಭೋಗನಂದೀಶ್ವರನ ದೇವಾಲಯವಿದೆ. ಇಲ್ಲಿಂದ ಸುಮಾರು ಮುಕ್ಕಾಲು ಕಿಮೀ, ದೂರದಲ್ಲಿ ನಂದಿ ರೈಲ್ವೆ ನಿಲ್ದಾಣವಿದೆ.
			(ಕೆ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ